Showing posts with label ತಾತ್ಕಾಲಿಕ ಪ್ರವಾಸಿಗರು. Show all posts
Showing posts with label ತಾತ್ಕಾಲಿಕ ಪ್ರವಾಸಿಗರು. Show all posts

Sunday, August 14, 2011

ಪ್ರವಾಸಿಗರ ಪಟ್ಟಿಗೆ ಸಿದ್ಧತೆ - ಒತ್ತಾಯ

ಅಪೂರ್ಣ ಪ್ರವಾಸಿಗರ ಪಟ್ಟಿ

ಇದರ ನಡುವೆ ಪ್ರವಾಸಿಗರ ಸಂಖ್ಯೆಯನ್ನು ಖಚಿತ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಮುರಳೀಧರ್, ರಂಗನಾಥ ಪ್ರಸಾದ್, ಸುಬ್ರಹ್ಮಣ್ಯ, ಕೇಶವ್ ಇವರುಗಳನ್ನು ಕುಟುಂಬ ಸಮೇತರಾಗಿ ಬರುವಂತೆ ಒತ್ತಾಯ ಮಾಡಿದೆ. ಅವರೆಲ್ಲರೂ "ಈ ಬಾರಿ ಮಂಜುನಾಥ ಕುಟುಂಬ ಸಮೇತ ಪ್ರವಾಸಕ್ಕೆ ಬರುವುದಾದರೆ ನಾವೆಲ್ಲರೂ ಕುಟುಂಬ ಸಮೇತರಾಗಿ ಬರುವುದು ಖಚಿತ" ಎಂದರು. ಅದಕ್ಕೆ ಉತ್ತರವಾಗಿ ಮಂಜುನಾಥ್, "ನಮ್ಮ ಮನೆಯವಳಿಗೆ ಪ್ರಯಾಣ ಮಾಡುವುದು ತುಂಬಾ ಕಷ್ಠದ ಸಂಗತಿಯಾದುದರಿಂದ ಅವರನ್ನು ಕರೆದುಕೊಂಡು ಬರಲು ಸಾಧ್ಯವಿಲ್ಲ ಎಂದ". ಅದಕ್ಕೆ ಪ್ರತಿಧ್ವನಿಯಾಗಿ ನಾವೆಲ್ಲರೂ, "ನಿಮ್ಮ ಮನೆಯವರಿಗೆ ಬಸ್ಸಿನಲ್ಲಿ ಪ್ರಯಾಣ ಮಾಡುವುದು ಆಗುವುದಿಲ್ಲ ಎಂದು ನೀನು ಇಷ್ಟು ದಿನ ಹೇಳಿಕೊಂಡು ಅವರ ಬರುವಿಕೆಯನ್ನು ತಪ್ಪಿಸುತ್ತಿದ್ದೆ. ಆದರೆ ಈ ಬಾರಿ ನಾವುಗಳು ಬಸ್ಸಿನಲ್ಲಿ ಹೋಗುತ್ತಿಲ್ಲ ಬದಲಾಗಿ ಟ್ರೈನಿನಲ್ಲಿ ಹೋಗುತ್ತಿರುವುದರಿಂದ ನೀನು ಕರೆದುಕೊಂಡು ಬರಲೇಬೇಕೆಂದು" ಒತ್ತಾಯ ಮಾಡಿದೆವು. ಸತತ ವಾದ ವಿವಾದಗಳ ನಂತರ ಮಂಜುನಾಥ್ ಸಹಾ ಕುಂಟುಂಬ ಸಮೇತ ಬರಲು ಒಪ್ಪಿಗೆ ನೀಡಿದ. ನಂತರ ನಾನು ಮತ್ತು ಪ್ರಸಾದ್ ನಮ್ಮ ಕಂಪೆನಿಯ "ಪಿಲ್ಲರ್"ಆದ ಶ್ರೀ.ಎಸ್.ಸಿ.ಆರ್. ಗಾಯಕ್ವಾಡ್ (ಎಸ್.ಸಿ.ಆರ್.ಜಿ) ಅವರನ್ನೂ ಈ ಬಾರಿಯ ಪ್ರವಾಸ ಕಾರ್ಯಕ್ರಮಕ್ಕೆ ಬರಲು ಆಹ್ವಾನಿಸಿ, ಈ ಬಾರಿ ಟ್ರೈನಿನಲ್ಲಿ ಪ್ರಯಾಣ ಮಾಡುತ್ತಿರುವುದಾಗಿಯೂ ಮತ್ತು ಪ್ರಯಾಣ ಅಷ್ಟು ದುಬಾರಿಯೂ ಇಲ್ಲದಿರುವುದರಿಂದ ತಪ್ಪದೇ ಪ್ರವಾಸಕ್ಕೆ ಬರಬೇಕೆಂದು ಒತ್ತಾಯಿಸಿದಾಗ ಅವರು "ನಾನು ಒಬ್ಬನೇ ಬರಲು ಆಗುವುದಿಲ್ಲ, ಬರುವುದಾದರೆ ಮನೆಮಂದಿಯನ್ನೆಲ್ಲಾ ಕರೆದುಕೊಂಡು ಬರಬೇಕು. ಅವರನ್ನೆಲ್ಲಾ (ಒಟ್ಟು ನಾಲ್ಕು ಮಂದಿ) ಕರೆದುಕೊಂಡು ಬರುವುದಾದರೆ ನನ್ನ ಜೇಬಿಗೆ ದೊಡ್ಡ ಕತ್ತರಿ ಬೀಳುತ್ತದೆ. ಆದರೆ ನೋಡೋಣ" ಎಂಬ ಹಾರಿಕೆಯ ಉತ್ತರವನ್ನು ಕೊಟ್ಟರು. ನಂತರ ನಾವು ನಮ್ಮ ಸಹೋದ್ಯೋಗಿಯಾದ ಷಣ್ಮುಖ ನನ್ನು ಪ್ರವಾಸಕ್ಕೆ ಬರಲು ಒತ್ತಾಯ ಮಾಡಿದೆವು. ಆದರೆ ಷಣ್ಮುಖ್ ನಾನು ಮುಂದಿನ ವರ್ಷ ಕೈಲಾಸ ಪರ್ವತ ಯಾತ್ರೆಗೆ ಹೋಗಬೇಕಾಗಿದೆ, ಅದಕ್ಕೆ ಈಗಿನಿಂದಲೇ ಹಣ ಸಂಗ್ರಹಿಸಿ ಇಡಬೇಕಾಗಿದೆ, ಆದ್ದರಿಂದ ಈ ಸಲ ನಾನು ಪ್ರವಾಸಕ್ಕೆ ಬರುವುದಿಲ್ಲ ಎಂದು ನಿರಾಶೆಯ ಉತ್ತರವನ್ನು ಕೊಟ್ಟನಾದರೂ ನಾವುಗಳು ನಿರಾಶರಾಗದೇ ನಮ್ಮ ಪ್ರಯತ್ನ ಮುಂದುವರೆಸಿದೆವು. ಇದರ ಮಧ್ಯೆ ನಮ್ಮ ಆಟೋ ಡಿವಿಶನ್ ನ ಹೊಸ ಉದ್ಯೋಗಿಗಳಾದ ಶ್ರೀಮತಿ. ಶೈಲಜಾ (ಗಂಗೆ) ಮತ್ತು ಶ್ರೀಮತಿ. ವಿದ್ಯಾ ಹೆಗ್ಗಡೆ (ಗೌರಿ) ಇವರುಗಳೂ ಸಹ ಪ್ರವಾಸಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದು ನಮ್ಮ ಬಲ ಇನ್ನಷ್ಟು ಹೆಚ್ಚಲು ಕಾರಣವಾಯಿತು. ಜೊತೆಗೆ ನಮ್ಮ ಸಂಸ್ಥೆಯ ಹಿಂದಿನ ಸಹೋದ್ಯೋಗಿಯಾಗಿದ್ದಂತಹ ಶ್ರೀ. ಶಿವರಾಮ ಶೆಟ್ಟಿ ಮತ್ತು ಅವರ ಕುಟುಂಬವನ್ನು ಈ ಪ್ರವಾಸಕ್ಕೆ ಆಹ್ವಾನಿಸಿದಾಗ, ಆರಂಭದಲ್ಲಿ ಅವರಿಂದ ಕೊಂಚ ಮಟ್ಟಿನ ಪ್ರತಿರೋಧ ಕಂಡು ಬಂತಾದರೂ ಅವರು ಪ್ರವಾಸಕ್ಕೆ ಬರುವುದು ಖಚಿತವಾಯಿತು. ಈ ಒಂದು ಅಪೂರ್ಣ ಪ್ರವಾಸಿಗರ ಪಟ್ಟಿಯನ್ನೂ ನಮ್ಮ ಮುಂದಿನ ಸಭೆಯಲ್ಲಿ ಸಭೆಯಲ್ಲಿ ಚರ್ಚಿಸುವ ಸಲುವಾಗಿ ಸಿದ್ಧಪಡಿಸಿಕೊಂಡೆ.