Monday, September 28, 2009

ಪ್ರವಾಸದ ಆರಂಭ


ದಿನಾಂಕ ೨೬.೦೯.೨೦೦೯ ರ ರಾತ್ರಿ ೮ ಘಂಟೆಗೆ ನಮ್ಮ ಪ್ರವಾಸ ಕಾರ್ಯಕ್ರಮ ಆರಂಭಗೊಂಡಿತು. ಈ ಮುಂಚೆ ತಿಳಿಸಿದಂತೆ ನಮ್ಮ ಈ ದಿನದ ರಾತ್ರಿ ಊಟವನ್ನು ಪಾರ್ಸೆಲ್ ಮಾಡಿಸಿಕೊಳ್ಳಲಾಗಿತ್ತು. ಸರಿಸುಮಾರು ೯.೩೦ ರ ವೇಳೆಗೆ ನಾವುಗಳು ಹಿರಿಯೂರಿನ ಸಮೀಪದ ಹೋಟೇಲೊಂದರ ಬಳಿ ವಾಹನವನ್ನು ನಿಲ್ಲಿಸಿ ಊಟದ ಸಿದ್ಧತೆ ನಡೆಸಿದೆವು. ಎಲ್ಲರೂ ಪಲಾವ್, ಮೊಸರು ಬಜ್ಜಿ, ಒಗ್ಗರಣೆ ಮೊಸರನ್ನ, ಒಡೆ ಗಳನ್ನು ತುಂಬಾ ಚೆನ್ನಾಗಿದೆ ಎಂದು ಹೊಗಳುತ್ತಾ ಊಟ ಮಾಡಿದರು. ಇದರ ಮಧ್ಯೆ ನಮ್ಮ ಕಾರ್ಖಾನೆ ಮಹಾ ಪ್ರಭಂಧಕರಾದ ಶ್ರೀ. ಪಾರ್ಥಸಾರಥಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಚಂಪಾಕಲಿ ಸಿಹಿ ತಿಂಡಿಯನ್ನು ಕೊಂಡು ತಂದಿದ್ದರು. ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡಿದರು. ನಾನು ಸಮೀಪದ ಬೀಡಾ ಅಂಗಡಿಯಿಂದ ನನಗೆ ಮತ್ತು ಸಹನಾಗೆ ಸ್ವೀಟ್ ಬೀಡಾ ತೆಗೆದುಕೊಂಡೆ. ಸುಮಾರು ೧೦.೩೦ ರ ಹೊತ್ತಿಗೆ ನಮ್ಮ ವಾಹನ ಅಲ್ಲಿಂದ ಪ್ರಯಾಣ ಮುಂದುವರೆಸಿತು. ಪ್ರಯಾಣ ಸಂಧರ್ಭದಲ್ಲಿ ನಾನು ತಂದಿದ್ದ ಗಂಗಾವತಿ ಪ್ರಾಣೇಶ್ ಮತ್ತು ಗಂಗಾವತಿ ನರಸಿಂಹ ಜೋಶಿ ರವರ ಹಾಸ್ಯದ ದೃಶ್ಯಾವಳಿಗಳನ್ನು ನೋಡಿ ನಗೆಗಡಲಲ್ಲಿ ತೇಲಿ ನಿದ್ದೆಗೆ ಮೊರೆ ಹೋದೆವು.
ದಿನಾಂಕ ೨೭.೦೯.೨೦೦೯ ರ ಬೆಳೆಗ್ಗೆ ಸುಮಾರು ೭ ಘಂಟೆಗೆ ಅಂಕೋಲದ ಕಾಮತ್ ಹೋಟೆಲ್ ಗೆ ತೆರಳಿದೆವು. ಎಲ್ಲರೂ ಕೈ ಕಾಲು ಮುಖ ತೊಳೆದುಕೊಂಡು ಇಡ್ಲಿ, ವಡೆ ತಿಂದು ಕಾಫಿ ಕುಡಿದೆವು. ಆದರೆ ಶಿವರಾಮಶೆಟ್ಟಿ, ರಮೇಶ್, ಸುಬ್ರಹ್ಮಣ್ಯ ಮತ್ತು ಮಂಜುನಾಥ್ ಅಲ್ಲಿ ತಿಂಡಿ ತಿನ್ನದೇ ಬರೀ ಕಾಫೀ ಕುಡಿದರು. ತಿಂಡಿ ತಿಂದು ಕಾಫೀ ಕುಡಿದ ನಮಗೆಲ್ಲರಿಗೂ ತಣ್ಣನೆಯ ಕಾಫೀ ಸಿಕ್ಕಿತು. ಇದರ ಬಗ್ಗೆ ಹೋಟೆಲ್ ಮಾಲೀಕರ ಬಳಿ ಚಕಾರವೆತ್ತಿದ ಶ್ರೀಮತಿ ಉಮಾ ಶೆಟ್ಟಿ ರವರು ಎಲ್ಲರಿಗೂ ಮತ್ತೊಂದು ಲೋಟ ಬಿಸಿ ಬಿಸಿ ಕಾಫೀ ಸಿಗುವಂತೆ ಮಾಡಿದರು. ಅಲ್ಲಿಂದ ಸುಮಾರು ೮ ಘಂಟೆಗೆ ನಾವುಗಳು ಗೋವಾದ ಕಡೆ ಪ್ರಯಾಣ ಮುಂದುವರೆಸಿದೆವು.




No comments:

Post a Comment